"ಇಂದು ಬಾಬಾ ನನ್ನ ಜೊತೆ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು.." ಪ್ರಿಯಾಂಕಾ ಮೊಂಡಲ್ ಇಳಿದನಿಯಲ್ಲಿ ಹೇಳಿದರು. ಪ್ರಕಾಶಮಾನವಾದ ಕೆಂಪು ಮತ್ತು ಚಿನ್ನದ ಬಣ್ಣದ ಉಡುಪನ್ನು ಧರಿಸಿ, ತೊಡೆಯ ಮೇಲೆ ಹೂವಿನ ಹೂಗೊಂಚಲು ಇರಿಸಿಕೊಂಡು, ನೀಲಿ-ಗುಲಾಬಿ ಬಣ್ಣದ ಪಲ್ಲಕ್ಕಿಯ ಮೇಲೆ ಕುಳಿತು ತನ್ನ ಮಾವನ ಮನೆಗೆ ಹೋಗಲು ತಯಾರಾಗಿದ್ದ ಪ್ರಿಯಾಂಕಾ ತನ್ನ ತಂದೆಯ ನೆನಪಿನಲ್ಲಿ ಬೇಯುತ್ತಿದ್ದರು.
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದ ಈ ಹಳ್ಳಿಯ ನಿವಾಸಿಯಾದ ಪ್ರಿಯಾಂಕಾ (23) 2020ರ ಡಿಸೆಂಬರ್ 6ರಂದು 26 ವರ್ಷದ ಹಿರಣ್ಮಯ್ ಮೊಂಡಲ್ ಅವರನ್ನು ವಿವಾಹವಾದರು. ಹಿರಣ್ಮಯ್ ಅವರ ನೆರೆ ಮನೆಯವರಾಗಿದ್ದು ಕೊಲ್ಕತ್ತಾದ ಬಟ್ಟೆಯಂಗಡಿಯೊಂದರಲ್ಲಿ ಫ್ಲೋರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಪರಸ್ಪರ ಪ್ರೀತಿಸುತ್ತಿದ್ದ ಇವರು ಅವರು 2019ರಲ್ಲಿ ಮದುವೆಯಾಗಲು ನಿರ್ಧರಿಸಿದರು.
ಆದರೆ 2019ರ ಜುಲೈ 29ರಂದು ಹುಲಿ ದಾಳಿಯಲ್ಲಿ ಪ್ರಿಯಾಂಕಾ ಅವರ ತಂದೆ ಅರ್ಜುನ್ ಮೊಂಡಲ್ (45) ನಿಧನರಾದ ನಂತರ, ಪ್ರೇಮಿಗಳು ಲಹಿರಿಪುರ ಗ್ರಾಮ ಪಂಚಾಯತ್ನ ಹಳ್ಳಿಯಲ್ಲಿ ನಡೆಯಬೇಕಿದ್ದ ತಮ್ಮ ಮದುವೆಯನ್ನು ಮುಂದೂಡಿದರು. ಅರ್ಜುನ್, ವೃತ್ತಿಯಲ್ಲಿ ಮೀನುಗಾರನಾಗಿದ್ದು, ಏಡಿಗಳನ್ನು ಹಿಡಿಯಲು ನಿಯಮಿತವಾಗಿ ಅತ್ಯಂತ ಮುಖ್ಯ ಪ್ರದೇಶವಾದ ಪಿರ್ಖಾಲಿ ಗಾಜಿ ಅರಣ್ಯದಲ್ಲಿರುವ ಸುಂದರ್ಬನ್ಸ್ ಹುಲಿ ಸಂರಕ್ಷಣಾ ಯೋಜನೆ ಪ್ರದೇಶಕ್ಕೆ ಹೋಗುತ್ತಿದ್ದರು. ಅಲ್ಲಿ ಹುಲಿಗೆ ಬಲಿಯಾದ ಅವರ ದೇಹದ ಅವಶೇಷಗಳು ಇಂದಿಗೂ ಪತ್ತೆಯಾಗಿಲ್ಲ.
ಅರ್ಜುನ್, ಏಡಿ ಹಿಡಿಯಲು ಕಾಡಿಗೆ ಹೋದಾಗಲೆಲ್ಲಾ, ಅವರು ಸುರಕ್ಷಿತವಾಗಿ ಮನೆಗೆ ಮರಳುವವರೆಗೂ ಮನೆಯಲ್ಲಿ ಎಲ್ಲರೂ ಭಯಭೀತರಾಗಿರುತ್ತಿದ್ದರು. ಜುಲೈ 2019ರಲ್ಲಿ ಅರ್ಜುನ್ ಏಡಿ ಹಿಡಿಯಲು ಹೋದಾಗ, ತನ್ನ ಮಗಳ ಮದುವೆಯ ಯೋಚನೆಯಲ್ಲಿದ್ದರು. ಆದರೆ ಅದೇ ಅವರ ಕೊನೆಯ ಏಡಿ ಬೇಟೆಯಾಯಿತು.
"ಪ್ರಿಯಾಂಕಾಳ ಮದುವೆ ಖರ್ಚಿಗಾಗಿ ನಮಗೆ ಹಣ ಬೇಕಿತ್ತು, ಹೀಗಾಗಿ ಅವರಿಗೆ ಕಾಡಿಗೆ ಹೋಗದೆ ಬೇರೆ ದಾರಿಯಿರಲಿಲ್ಲ, ಆದರೆ ಏನೋ ಕೆಟ್ಟದ್ದು ಸಂಭವಿಸಲಿದೆಯೆನ್ನುವ ಸಂಶಯ ಅವರ ಮನಸಿನಲ್ಲಿ ಸುಳಿದಾಡುತ್ತಿತ್ತು" ಎಂದು ಅವರ ಪತ್ನಿ ಪುಷ್ಪಾ ಹೇಳಿದರು.

ಪ್ರಿಯಾಂಕಾ ಮೊಂಡಲ್ ತನ್ನ ವಿವಾಹ ಸಮಾರಂಭದ ಮೊದಲು ತನ್ನ ತಂದೆಯ ಭಾವಚಿತ್ರಕ್ಕೆ ಹೂಮಾಲೆ ಹಾಕುತ್ತಿರುವುದು
ಅರ್ಜುನ್ ಅವರ ಹಠಾತ್ ಮರಣದಿಂದಾಗಿ, ಮನೆ ನಡೆಸುವ ಮತ್ತು ಅವರ ಮಕ್ಕಳಾದ ಪ್ರಿಯಾಂಕಾ ಮತ್ತು ರಾಹುಲ್ ಜೀವನ ರೂಪಿಸುವ ಸಂಪೂರ್ಣ ಜವಾಬ್ದಾರಿ ಅವರ (ಪುಷ್ಪಾ) ಹೆಗಲ ಮೇಲೆ ಬಿದ್ದಿತು. "ಪ್ರಿಯಾಂಕಾಳ ಮದುವೆಯು ಅವಳ ತಂದೆಯ ಕನಸಾಗಿತ್ತು. ಈ ಕನಸನ್ನು ನಾನು ಹೇಗಾದರೂ ಮಾಡಿ ಅವರ ಪೂರ್ಣಗೊಳಿಸುವ ವಿಶ್ವಾಸ ನನಗಿತ್ತು. ನನ್ನ ಮಗಳನ್ನು ಎಷ್ಟು ಕಾಲ ಮದುವೆಯಿಲ್ಲದೆ ಕೂರಿಸಲು ಸಾಧ್ಯ?" ಅವರು ಕೇಳುತ್ತಾರೆ. ವಿವಾಹದ ಒಟ್ಟು ಖರ್ಚು 170,000 ರೂ. - ಇದು ತನ್ನ ನಲವತ್ತರ ಹರೆಯದ ಬಾಗಿಲಿನಲ್ಲಿರುವ ಪುಷ್ಪಾ ಅವರ ಪಾಲಿಗೆ ಬಹಳ ದೊಡ್ಡ ಮೊತ್ತವಾಗಿದೆ.
ಅರ್ಜುನ್ ಅಕಾಲಿಕ ಸಾವಿನ ನಂತರ, ಹೆಗಲಿಗೇರಿದ ಕುಟುಂಬದ ಆರ್ಥಿಕ ಬಿಕ್ಕಟ್ಟು ಮತ್ತು ಇಬ್ಬರು ಮಕ್ಕಳ ಏಕೈಕ ರಕ್ಷಕರಾಗುವ ಜವಾಬ್ದಾರಿ, ಪುಷ್ಪಾರ ದೇಹವನ್ನು ಸಾಕಷ್ಟು ಜರ್ಜರಿತಗೊಳಿಸಿದೆ. ಅವರು ದೀರ್ಘಕಾಲದ ಆತಂಕ ಮತ್ತು ಖಿನ್ನತೆಯಿಂದ ಬಳಲುತ್ತಿದ್ದಾರೆ. ಮೇ 20, 2020ರಂದು ಆಂಫಾನ್ ಚಂಡಮಾರುತ ಅಪ್ಪಳಿಸಿದಾಗ ಅವರ ಸ್ಥಿತಿ ಇನ್ನಷ್ಟು ಹದಗೆಟ್ಟಿತು. ಕೋವಿಡ್ -19 ಪಿಡುಗು ಅವರ ಆತಂಕದ ಹೆಚ್ಚಳಕ್ಕೆ ಕಾರಣವಾಗಿ ಅವರ ರಕ್ತದೊತ್ತಡ ವೇಗವಾಗಿ ಏರಿಳಿತಗೊಳ್ಳಲು ಪ್ರಾರಂಭಿಸಿತು ಮತ್ತು ಪೌಷ್ಟಿಕ ಆಹಾರದ ಕೊರತೆಯಿಂದಾಗಿ ರಕ್ತಹೀನತೆಯೂ ಕಾಡಿತು. "ಲಾಕ್ಡೌನ್ ಸಮಯದಲ್ಲಿ ಸರಿಯಾದ ಊಟವಿಲ್ಲದೆ ಹಲವು ದಿನಗಳನ್ನು ಕಳೆದಿದ್ದೆವು" ಎಂದು ಪುಷ್ಪಾ ಹೇಳಿದರು.
ತಂದೆಯ ಮರಣದ ನಂತರ, 20 ವರ್ಷದ ರಾಹುಲ್ ಕೂಡ ಕುಟುಂಬದ ಸಲುವಾಗಿ ಹೆಚ್ಚುವರಿ ಸಂಪಾದನೆ ಮಾಡುವ ಒತ್ತಡದಲ್ಲಿ ಸಿಲುಕಿದ್ದಾರೆ. ಇದಕ್ಕಾಗಿ ಅವರು ನಿರ್ಮಾಣ ಸ್ಥಳಗಳಲ್ಲಿ ಮತ್ತು ಹೊಲಗಳಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ತಾಯಿಯ ಅನಾರೋಗ್ಯ ರಾಹುಲ್ರನ್ನು ಇನ್ನಷ್ಟು ಹೆಚ್ಚು ದುಡಿಯಬೇಕಾದ ಅನಿವಾರ್ಯತೆಗೆ ಈಡು ಮಾಡಿತು. ಲಾಕ್ಡೌನ್ ಪ್ರಾರಂಭವಾಗುವ ಮೊದಲು ಅವರು ಕೆಲಸ ಮಾಡುವ ಮೂಲಕ 8,000 ರೂಗಳನ್ನು ಉಳಿಸಿದ್ದರು, ಆದರೆ ನಂತರ ಆ ಕೆಲಸಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಅವರ ಉಳಿತಾಯದ ಹಣವನ್ನು ತನ್ನ ಅಕ್ಕನ ಮದುವೆಗೆ ಖರ್ಚು ಮಾಡಿದ್ದಾರೆ.
ಪುಷ್ಪಾ ಅವರು ತಮ್ಮ ಎರಡು ಕೋಣೆ ಮತ್ತು ಒಂದು ಅಡುಗೆ ಕೋಣೆಯಿರುವ ಮನೆಯನ್ನು ಸ್ಥಳೀಯ ಬಡ್ಡಿ ವ್ಯಾಪಾರಿಗಳ ಬಳಿ ಅಡವಿಡುವ ಅನಿವಾರ್ಯತೆಗೆ ಒಳಗಾಗಿದ್ದಾರೆ. ಮನೆಯ ಮೇಲೆ 34% ಬಡ್ಡಿ ದರದಲ್ಲಿ 50,000 ರೂಪಾಯಿಗಳ ಸಾಲ ಪಡೆದಿದ್ದು ಆರು ತಿಂಗಳಿನಲ್ಲಿ ಅರ್ಧ ಮೊತ್ತವನ್ನೂ, ಇನ್ನರ್ಧವನ್ನು ಇನ್ನಾರು ತಿಂಗಳಿನಲ್ಲಿ ತೀರಿಸುವ ಕರಾರಿನೊ೦ದಿಗೆ ಹಣ ನೀಡಲಾಗಿದೆ. "ಒಂದು ವೇಳೆ ಸಾಲವನ್ನು ಸಮಯಕ್ಕೆ ಸರಿಯಾಗಿ ತೀರಿಸಲು ಸಾಧ್ಯವಾಗದೆ ಹೋದರೆ, ಮನೆ ಕಳೆದುಕೊಳ್ಳಬೇಕಾಗುತ್ತದೆನ್ನುವ ಭಯ ಕಾಡುತ್ತದೆ. ಹಾಗೇನಾದರೂ ಆದರೆ ನಾವು ಬೀದಿಗೆ ಬರಬೇಕಾಗುತ್ತದೆ." ಎಂದು ಪುಷ್ಪಾ ಹೇಳುತ್ತಾರೆ.
ಆದರೆ ಇದೆಲ್ಲ ನೋವುಗಳ ನಡುವೆಯೂ ಅವರ ಬದುಕಿನಲ್ಲಿ ಒಂದಷ್ಟು ಭರವಸೆಯ ಸಂಗತಿಗಳೂ ಇವೆ. "ಹಿರಣ್ಮಯ ಬಹಳ ಒಳ್ಳೆಯ ಮನುಷ್ಯ" ಎಂದು ಅವರು ಹೇಳುತ್ತಾರೆ. "ಮದುವೆಗೂ ಮೊದಲು ಲಾಕ್ಡೌನ್ ಸಮಯದಲ್ಲಿ ಅವನು ನಮಗೆ ಸಾಕಷ್ಟು ಸಹಾಯ ಮಾಡಿದ. ಮನೆಗೆ ಬೇಕಾದ ದಿನಸಿ ತಂದುಕೊಡುತ್ತಿದ್ದ. ಆಗಾಗ ಮನೆಗೆ ಬಂದು ವಿಚಾರಿಸುತ್ತಿದ್ದ. ಅವರ ಕುಟುಂಬವೂ ವರದಕ್ಷಿಣೆಗಾಗಿ ಆಗ್ರಹಿಸಲಿಲ್ಲ."

ಪುಷ್ಪಾ ಮೊಂಡಲ್ ಅವರು ಸ್ಥಳೀಯ ಆಭರಣ ಅಂಗಡಿಯಿಂದ ಬಂಗಾಳಿ ವಧುಗಳು ಧರಿಸುವ ಸಾಂಪ್ರದಾಯಿಕ ಆಭರಣವಾದ ಪೋಲಾ, (ಹವಳದ ಬಳೆ) ಖರೀದಿಸುತ್ತಿರುವುದು. 'ನಾನು ಇದನ್ನು ನಾನೇ ಮಾಡಬೇಕಾಗುತ್ತದೆಂದು ಎಂದೂ ಊಹಿಸಿರಲಿಲ್ಲ' ಎಂದು ಅವರು ಹೇಳುತ್ತಾರೆ
ಮದುವೆಯ ದಿನದಂದು ಪ್ರಿಯಾಂಕಾ ತನ್ನ ಹೊಳೆಯುವ ಹಸಿರು, ಕೆಂಪು ಮತ್ತು ಚಿನ್ನದ ಸೀರೆಯನ್ನು ಚಿನ್ನದ ಆಭರಣಗಳೊಂದಿಗೆ ಧರಿಸಿದ್ದರು. ಅವರಿಗೆ ಗೊತ್ತಿಲ್ಲದಂತೆ, ಅವರ ವಿವಾಹದ ವೆಚ್ಚವನ್ನು ಭರಿಸುವ ಸಲುವಾಗಿ ಮನೆ ಅಡಮಾನ ಇಡಲಾಗಿತ್ತು.
ಮದುವೆಯಲ್ಲಿ ಸ್ಥಳೀಯರಾದ ಮೀನುಗಾರ ಪುರುಷರು ಮತ್ತು ಮಹಿಳೆಯರು, ಜೇನು ಸಂಗ್ರಾಹಕರು, ಶಿಕ್ಷಕರು, ದೋಣಿಯವರು, ಜಾನಪದ ಸಂಗೀತಗಾರರು ಮತ್ತು ನರ್ತಕರು ಎಲ್ಲರೂ ಸೇರಿದಂತೆ 350 ಅತಿಥಿಗಳು ಸೇರಿದ್ದರು. ಮನೆಯನ್ನು ಹಳದಿ ದೀಪಗಳಿಂದ ಅಲಂಕರಿಸಲಾಗಿತ್ತು. ಸುಂದರ್ಬನ್ಸ್ನ ಜನರ ಸಂತೋಷ ಮತ್ತು ದುಃಖದ ನಿಕಟ ಒಡನಾಡಿಯಾಗಿ ಅರ್ಜುನ್ ಎಲ್ಲರಿಗೂ ವೈಯಕ್ತಿಕವಾಗಿ ಪರಿಚಿತರಾಗಿದ್ದರು.
ಆ ದಿನ ಮದುವೆಗೆ ಬಂದ ಮಹಿಳೆಯರು ಅಡುಗೆ ಮತ್ತು ಇತರ ಕೆಲಸಗಳಿಗೆ ಸಹಾಯ ಮಾಡಿದರು. ಅದೇ ಸಮಯದಲ್ಲಿ, ಸಂತೋಷ ಮತ್ತು ಒತ್ತಡ ಅನುಭವಿಸಿದ್ದರ ಪರಿಣಾಮವಾಗಿ ಪುಷ್ಪಾ ಮದುವೆಯ ಸಮಯದಲ್ಲಿ ಮತ್ತೆ ಮತ್ತೆ ಪ್ರಜ್ಞೆ ಕಳೆದುಕೊಳ್ಳುತ್ತಿದ್ದರು, ಆದರೆ ಕೊನೆಗೂ ಮಗಳ ಮದುವೆ ಒಳ್ಳೆಯ ರೀತಿಯಲ್ಲಿ ಮುಗಿದಿದ್ದರಿಂದ ಅವರು ನಿರಾಳರಾಗಿದ್ದರು.
ವಿವಾಹ ಸಮಾರಂಭ ಮುಗಿದ ಕೂಡಲೇ ಪುಷ್ಪಾ ಸಾಲಗಾರರನ್ನು ನಿಭಾಯಿಸಬೇಕಾಗಿತ್ತು - ಮಂಟಪ ಅಲಂಕಾರ ಮತ್ತು ವಿದ್ಯುತ್ ಅಲಂಕಾರಕ್ಕೆ 40,000 ರೂ ಪಾವತಿಸುವುದಿತ್ತು. "ಎಲ್ಲರೂ ಹಣ ಕೇಳಲು ಪ್ರಾರಂಭಿಸಿದರೆ ನನ್ನ ತಾಯಿಯ ಆರೋಗ್ಯ ಹದಗೆಡುತ್ತದೆ" ಎಂದು ರಾಹುಲ್ ಹೇಳಿದರು. "ನಾನು ಹೆಚ್ಚು ಶ್ರಮವಹಿಸಿ ಹೆಚ್ಚು ಹೆಚ್ಚು ಸಂಪಾದಿಸಲು ಪ್ರಯತ್ನಿಸುತ್ತೇನೆ."
ಅರ್ಜುನ್ ಅವರ ಸಾವಿನ ನಂತರ ಪುಷ್ಪಾ ಅವರು ಹುಲಿ ದಾಳಿಯ ಸಂತ್ರಸ್ತರ ಕುಟುಂಬಕ್ಕೆ ನೀಡಲಾಗುವ ಪರಿಹಾರ ಧನಕ್ಕಾಗಿ ಅರ್ಜಿ ಸಲ್ಲಿಸಿ ರಾಜ್ಯ ಅಧಿಕಾರಶಾಹಿಯೊಂದಿಗೆ ಹೋರಾಡಬೇಕಾಗಿದೆ. ಪಶ್ಚಿಮ ಬಂಗಾಳ ಸರ್ಕಾರದ ಅರಣ್ಯ ಇಲಾಖೆ, ಮೀನುಗಾರಿಕೆ ಇಲಾಖೆ ಮತ್ತು ರಾಜ್ಯದ ಗುಂಪು ವೈಯಕ್ತಿಕ ಅಪಘಾತ ವಿಮೆ ಯೋಜನೆಯಡಿ ಕುಟುಂಬವು 4-5 ಲಕ್ಷ ರೂ.ಗಳ ಪರಿಹಾರಕ್ಕೆ ಅರ್ಹವಾಗಿದೆ .

ಅರ್ಜುನ್ ಸಾವಿನ ನಂತರ ಪರಿಹಾರದ ಕುರಿತು ಮುಂದಿನ ವಿಚಾರಣೆಗೆ ಪುಷ್ಪಾ ಅವರನ್ನು ಕೋಲ್ಕತ್ತಾಕ್ಕೆ ಹಾಜರಾಗುವಂತೆ ಸ್ಥಳೀಯ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪತ್ರವೊಂದು ಬಂದಿದೆ.
ಆದರೆ ಅಧಿಕಾರಶಾಹಿ ಅಡೆತಡೆಗಳು ಮತ್ತು ಕಾನೂನು ವೆಚ್ಚಗಳ ಭಯದಿಂದ ಅರ್ಜಿ ಸಲ್ಲಿಸಲು ಕುಟುಂಬಗಳು ಹಿಂಜರಿಯುತ್ತವೆ. 2017ರಲ್ಲಿ ಮಾಹಿತಿ ಹಕ್ಕು ( ಆರ್ಟಿಐ ) ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದ ಪರಿಗೆ ದೊರೆತ ಮಾಹಿತಿಯಂತೆ, 2016ರವರೆಗೆ ಕಳೆದ ಆರು ವರ್ಷಗಳಲ್ಲಿ ಕೇವಲ ಐದು ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ. ಆ ಪೈಕಿ ಮೂವರಿಗೆ ಮಾತ್ರ ಹಣ ಸಿಕ್ಕಿದ್ದು, ಅದು ಕೂಡ ಪೂರ್ಣ ಮೊತ್ತವಲ್ಲ.
ಅರ್ಜುನ್ ಆಗಾಗ್ಗೆ ಏಡಿಗಳನ್ನು ಹಿಡಿಯಲು ಸುಂದರ್ಬನ್ಸ್ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ 2-3 ದಿನಗಳವರೆಗೆ ಹೋಗುತ್ತಿದ್ದರು. ಪ್ರತಿ ಬಾರಿಯೂ ಅವರು ಬೇಟೆಯನ್ನು ಹಳ್ಳಿಯ ವ್ಯಾಪಾರಿಗಳಿಗೆ ಮಾರಿ, ಏಡಿಯ ಗಾತ್ರವನ್ನು ಅವಲಂಬಿಸಿ 15,000ರಿಂದ 30,000 ರೂಗಳ ತನಕ ಸಂಪಾದಿಸುತ್ತಿದ್ದರು.
ಸುಂದರ್ಬನ್ಸ್ ಅರಣ್ಯವು ಸುಮಾರು 1,700 ಚದರ ಕಿಲೋಮೀಟರ್ಗಳಷ್ಟು ಸೂಕ್ಷ್ಮ ಹುಲಿಗಳ ಆವಾಸಸ್ಥಾನ ಅಥವಾ ನಿಷೇಧಿತ ಪ್ರದೇಶವನ್ನು ಹೊಂದಿದೆ. ಅದರಲ್ಲಿ ಸುಮಾರು 885 ಚದರ ಕಿಲೋಮೀಟರ್ನ ಬಫರ್ ಪ್ರದೇಶವಾಗಿದೆ. ಬಫರ್ ಪ್ರದೇಶಗಳಲ್ಲಿ, ಮೀನು ಮತ್ತು ಏಡಿಗಳನ್ನು ಹಿಡಿಯುವುದು, ಮತ್ತು ಜೇನುತುಪ್ಪ ಮತ್ತು ಕಟ್ಟಿಗೆ ಸಂಗ್ರಹಿಸುವುದು ಮುಂತಾದ ಕೆಲವು ಜೀವನೋಪಾಯ ಚಟುವಟಿಕೆಗಳಿಗೆ ಅರಣ್ಯ ಇಲಾಖೆ ಪರವಾನಗಿ ಮತ್ತು ದೋಣಿ ಪರವಾನಗಿಯೊಂದಿಗೆ ಅವಕಾಶವಿದೆ. ಆದರೆ ನಿರ್ಬಂಧಿತ ಪ್ರದೇಶಗಳನ್ನು ಪ್ರವೇಶಿಸಿದಲ್ಲಿ ದೊಡ್ಡ ಮೊತ್ತದ ದಂಡವನ್ನು ಪಾವತಿಸಬೇಕಾಗುತ್ತದೆ. ಆ ಪ್ರದೇಶವನ್ನು ದಾಟಿ ಹೋಗಿ ಹುಲಿಗೆ ಬಲಿಯಾದಲ್ಲಿ ಅವರ ಕುಟುಂಬವು ಪರಿಹಾರ ಧನ ಪಡೆಯುವ ಕಾನೂನು ಹಕ್ಕನ್ನು ಕಳೆದುಕೊಳ್ಳುತ್ತಾರೆ.
ಸುಂದರಬನ್ಸ್ ಗ್ರಾಮೀಣಾಭಿವೃದ್ಧಿ ಸಂಘದ ಕಾರ್ಯದರ್ಶಿಯಾಗಿ ಅರ್ಜುನ್ ಮಂಡಲ್ ಅವರಿಗೆ ಈ ನಿಯಮಗಳ ಬಗ್ಗೆ ಚೆನ್ನಾಗಿ ತಿಳಿದಿತ್ತು. ಪರಿಹಾರವನ್ನು ಪಡೆಯಲು ಅವರು ಅನೇಕ ಮಹಿಳೆಯರಿಗೆ ಸಕ್ರಿಯವಾಗಿ ಸಹಾಯ ಮಾಡಿದ್ದಾರೆ - ಮೂರು ದಶಕಗಳಲ್ಲಿ ಕನಿಷ್ಠ 3,000 , ಅಥವಾ ವರ್ಷಕ್ಕೆ 100ರಂತೆ ಬಲಿಯಾಗಿದ್ದಾರೆ (ಸ್ಥಳೀಯ ಜನರು, ಎನ್ಜಿಒಗಳು ಮತ್ತು ಇತರ ಮೂಲಗಳ ಪ್ರಕಾರ).
ಪ್ರಮುಖ ಸಂರಕ್ಷಿತ ಪ್ರದೇಶದಲ್ಲಿ ಅರ್ಜುನ್ ಮೀನುಗಾರಿಕೆ ಮಾಡುತ್ತಿದ್ದರಿಂದ, ಪುಷ್ಪಾರಿಗೆ ಪರಿಹಾರ ಸಿಗುವ ನಿರೀಕ್ಷೆಯಿಲ್ಲ. ಹಕ್ಕು ಪಡೆಯಲು ಪ್ರಯತ್ನಿಸುವುದು ಎಂದರೆ ವಕೀಲರನ್ನು ನೇಮಿಸಿಕೊಳ್ಳುವುದು, ಕೊಲ್ಕತ್ತಾಕ್ಕೆ ಪ್ರಯಾಣಿಸುವುದು ಮತ್ತು ದಾಖಲೆಗಳನ್ನು ಸಂಗ್ರಹಿಸುವುದು - ಇವುಗಳಲ್ಲಿ ಯಾವುದಕ್ಕೂ ತಾಳ್ಮೆ, ಆರೋಗ್ಯ ಮತ್ತು ಹಣ ಅವರ ಬಳಿಯಿಲ್ಲ, ಮುಖ್ಯವಾಗಿ ಅವರೀಗ ಮಗಳ ಮದುವೆಗೆ ಮಾಡಿದ ಸಾಲವನ್ನು ತೀರಿಸಬೇಕಿದೆ.
ಈ ಸಾಲವನ್ನು ಹೇಗೆ ಮರುಪಾವತಿಸುವುದು ಎನ್ನುವ ಗೊಂದಲದಲ್ಲಿ ರಾಹುಲ್ ಇದ್ದಾರೆ. "ನಾವು ಮನೆಯ ವಸ್ತುಗಳನ್ನು ಮಾರಾಟ ಮಾಡಲು ಪ್ರಾರಂಭಿಸಬೇಕಾಗಬಹುದು" ಎಂದು ಅವರು ಹೇಳಿದರು. ರಾಹುಲ್ ತನ್ನ ತಂದೆಯಂತೆ ಮತ್ತೆ ತಮ್ಮ ಹೊಟ್ಟೆಪಾಡಿಗಾಗಿ ಕಾಡನ್ನು ಅವಲಂಬಿಸಬೇಕಾಗಬಹುದು ಎನ್ನುವ ಭಯ ಪುಷ್ಪಾರದ್ದು.

ರಾಹುಲ್ ಮೊಂಡಲ್ ತನ್ನ 20ನೇ ವಯಸ್ಸಿನಲ್ಲಿ, ತಂದೆಯ ಮರಣದ ನಂತರ ಕುಟುಂಬಕ್ಕಾಗಿ ಸಂಪಾದಿಸಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ: 'ನಾವು ಈಗ ಕಷ್ಟದಲ್ಲಿದ್ದೇವೆ ಆದರೆ ಮುಂದೊಂದು ದಿನ ನಾನು ಮನೆಯ ಪರಿಸ್ಥಿತಿಯನ್ನು ಬದಲಿಸಲಿದ್ದೇನೆ'

ಇಬ್ಬರು ಸ್ಥಳೀಯರ ಸಹಾಯದೊಂದಿಗೆ ರಾಹುಲ್ (ಬಲ) ಮತ್ತು ಅವರ ಸಂಬಂಧಿ ಮಿಥುನ್ ಪ್ರಿಯಾಂಕಾ ಅವರ ಮದುವೆಗೆಂದು ಖರೀದಿಸಿದ ಅಲ್ಮೆರಾವನ್ನು ಇಳಿಸಿಕೊಳ್ಳುತ್ತಿರುವುದು. ಹತ್ತಿರದ ಪಟ್ಟಣವಾದ ಗೊಸಾಬಾದಿಂದ ಸರಕು ದೋಣಿ ರಜತ್ ಜುಬಿಲಿ ಗ್ರಾಮವನ್ನು ತಲುಪಲು ಐದು ಗಂಟೆ ತೆಗೆದುಕೊಳ್ಳುತ್ತದೆ

ವಿವಾಹ ಸಮಾರಂಭ ಪ್ರಾರಂಭವಾಗುವ ಮೊದಲು, ಅಲಂಕಾರಗಳನ್ನು ಪ್ರಿಯಾಂಕಾ ಪರಿಶೀಲಿಸುತ್ತಿರುವುದು

ಮದುವೆಯ ದಿನದಂದು ಮಗಳನ್ನು ಆಶೀರ್ವದಿಸಲು ಪುಷ್ಪಾ ಆಶಿರ್ಬಾದ್ ಆಚರಣೆ ನಡೆಸುತ್ತಿರುವುದು

ಮದುವೆಯ ದಿನದ ಬೆಳಿಗ್ಗೆ, ಸಂಬಂಧಿಕರು ಪ್ರಿಯಾಂಕಾರಿಗಗೆ ಅರಿಷಿನ ನೀರಿನ ಸ್ನಾನ ಮಾಡಿಸುತ್ತಿರುವುದು

ಮಧ್ಯಾಹ್ನದ ವಿವಾಹ ಪೂರ್ವ ಸಮಾರಂಭದಲ್ಲಿ ಪ್ರಿಯಾಂಕಾ ಮತ್ತು ಅವರ ಸಂಬಂಧಿಕರು

ಹಿರಣ್ಮಯ (ನಡುವೆ) ತನ್ನ (ಅಂಧ) ಅಳಿಯ ಮತ್ತು ಕುಟುಂಬದ ಇತರರೊಡನೆ ವಿವಾಹ ಸ್ಥಳದತ್ತ ಹೊರಡುತ್ತಿರುವುದು

ಜಾನಪದ ಕಲಾವಿದ ನಿತ್ಯಾನಂದ ಸರ್ಕಾರ್ (ಎಡದಿಂದ ಎರಡನೆಯವರು) ಮತ್ತು ಅವರ ತಂಡವು ಹಿರಣ್ಮಯ್ ಅವರ ವಿವಾಹ ಮೆರವಣಿಗೆಯಲ್ಲಿ ಪ್ರದರ್ಶನ ನೀಡುತ್ತಿರುವುದು

ಮದುವೆಗೆ ಮೊದಲು, ಸಂಬಂಧಿಕರು ಅರ್ಜುನ್ ಅವರ ಅಗಲಿದ ಆತ್ಮಕ್ಕೆ ಆಹಾರ ಅರ್ಪಿಸುವ ಸಮಯದಲ್ಲಿ ಕಣ್ಣೀರು ಹಾಕಿದರು

ಪುಷ್ಪಾ ದೀರ್ಘಕಾಲದ ಆಯಾಸ ಮತ್ತು ಒತ್ತಡದಿಂದ ಬಳಲುತ್ತಿದ್ದಾರೆ. ಮದುವೆ ಸಮಾರಂಭದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಮೂರ್ಛೆ ಹೋದರು

ಸಂಬಂಧಿಕರು ಪ್ರಿಯಾಂಕಾ ಅವರನ್ನು ಮರದ ಮಣೆಯ ಮೇಲೆ ಕುಳ್ಳಿರಿಸಿ ಮಂಟಪಕ್ಕೆ ಕರೆದೊಯ್ಯುತ್ತಿರುವುದು. ತನ್ನ ಮುಖವನ್ನು ಮದುಮಗನನ್ನು ನೋಡುವ ಮೊದಲು ವೀಳ್ಯದೆಲೆಯಿಂದ ಮುಚ್ಚಿಕೊಂಡಿದ್ದರು

ಪ್ರಿಯಾಂಕಾ ಸುಭೋ ದೃಷ್ಟಿ ಸಮಯದಲ್ಲಿ, ವಧು ಹಸೆಮಣೆಯ ಬಳಿ ತನ್ನ ವರನಿಗೆ ಮುಖಾಮುಖಿಯಾಗಿ ಬರುವ ಕ್ಷಣ

ಕೊನೆಗೆ ಹಿರಣ್ಮಯ್ ಮತ್ತು ಪ್ರಿಯಾಂಕಾ ವಿವಾಹವಾದರು ಮತ್ತುದಂಪತಿಗಳು ಮಿನುಗು ಕಾಗದದ ಚೂರುಗಳಡಿ ಮಿಂಚುತ್ತಿರುವುದು

ಪ್ರಿಯಾಂಕಾ ಅವರ ಹಿರಿಯ ಸಂಬಂಧಿಯೊಬ್ಬರು ಹಿರಣ್ಮಯ್ ಅವರೊಡನೆ ತಮಾಷೆ ಮಾಡುತ್ತಿರುವುದು. ವಯಸ್ಸಾದ ಮಹಿಳೆಯರು ವರನನ್ನು ತಮಾಷೆಯಾಗಿ ಕೀಟಲೆ ಮಾಡುವುದು ಇಲ್ಲಿ ವಾಡಿಕೆ

ಪುಷ್ಪಾ ತನ್ನ ನವ ವಿವಾಹಿತ ಮಗಳನ್ನು ಆಶೀರ್ವದಿಸುತ್ತಿರುವುದು

ನಿತ್ಯಾನಂದ ಸರ್ಕಾರ್ ಅವರು ಕಲಾ ಪ್ರದರ್ಶನ ನಡೆಸುವ ಮೂಲಕ ವಿವಾಹಕ್ಕೆ ಬಂದ ಅತಿಥಿಗಳನ್ನು ರಂಜಿಸುತ್ತಿರುವುದು.ಕೃಷಿಕರಾಗಿರುವ ಅವರು ಜಾನಪದ ಕಲಾವಿದರೂ ಹೌದು. ಅವರು ಝೂಮೂರ್ ಹಾಡುಗಳು, ಬನಬಿಬಿ ಪಾಲಾ ಮತ್ತು ಪಾಲಾ ಗಾನ ಇತ್ಯಾದಿ ಪ್ರದರ್ಶನ ನೀಡುತ್ತಾರೆ

ತನ್ನ ಮನೆಯಲ್ಲಿ ರಾತ್ರಿ ಕಳೆದ ನಂತರ, ಪ್ರಿಯಾಂಕಾ ಹಿರಣ್ಮಯ್ ಅವರ ನಿವಾಸಕ್ಕೆ ತೆರಳಲು ತಯಾರಾಗುತ್ತಿರುವುದು

ಪುಷ್ಪಾ ತನ್ನ ಮಗಳು ಶಾಶ್ವತವಾಗಿ ಮನೆ ಬಿಟ್ಟು ಹೋಗುವುದನ್ನು ನೆನದು ಕುಸಿದು ಬಿದ್ದರು. ʼಅವಳು ನನಗೆ ಆಧಾರವಾಗಿದ್ದಳು. ಇನ್ನು ಅವಳಿಲ್ಲದೆ ಒಬ್ಬಳೇ ಹೇಗಿರುವುದುʼ ಎಂದು ಆಳುತ್ತಿದ್ದರು

ಹೊರಟು ನಿಂತ ತನ್ನ ಅಕ್ಕ ಮತ್ತು ಬಾವನನ್ನು ತಬ್ಬಿ ಅಳುತ್ತಿರುವ ರಾಹುಲ್

ತನ್ನ ಹೊಸ ಮನೆಗೆ ಕರೆದೊಯ್ಯಲಿರುವ ಪಲ್ಲಕ್ಕಿಯಲ್ಲಿ ಕುಳಿತು ಕಣ್ಣೀರಾದ ಪ್ರಿಯಾಂಕ
ಈ ಲೇಖನದ ಪಠ್ಯವನ್ನು ಊರ್ವಶಿ ಸರ್ಕಾರ್ ಬರೆದಿದ್ದಾರೆ. ಇದರಲ್ಲಿ ಪರಿಗಾಗಿ ತನ್ನ ಸ್ವಂತ ಕೆಲಸ ಮತ್ತು ರಿತಾಯನ್ ಮುಖರ್ಜಿಅವರ ಕೆಲಸವನ್ನು ವರದಿ ಮಾಡುವುದು ಸೇರಿದೆ.
ಅನುವಾದ: ಶಂಕರ ಎನ್. ಕೆಂಚನೂರು